ಸಾಹಿತ್ಯ
ಕಬ್ಬಿಗರ ಕಾವ
  1. ಕಾವ್ಯದ ಹೆಸರು: ಕಬ್ಬಿಗರ ಕಾವ (ಸೊಬಗಿನ ಸುಗ್ಗಿ, ಕಾವನ ಗೆಲ್ಲ, ಮದನ ವಿಜಯ)
  2. ಕವಿಯ ಹೆಸರು: ಆಂಡಯ್ಯ
  3. ಕಾಲ: ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳು
  4. ಸ್ಥಳ/ಸ್ಥಳಗಳು: ಹಾನಗಲ್ಲು, ಧಾರವಾಡ ಜಿಲ್ಲೆ
  5. ಮತ-ಧರ್ಮ: ಜೈನ
  6. ಆಶ್ರಯದಾತರು: ಕದಂಬ ರಾಜವಂಶಕ್ಕೆ ಸೇರಿದ ಕಾಮದೇವ (ಕ್ರಿ.ಶ. 1180-1217)
  7. ಬಿರುದುಗಳು: ...
  8. ಸಾಹಿತ್ಯಪ್ರಕಾರ: ಕಾವ್ಯ. ಚಂಪೂ ಕಾವ್ಯ
  9. ಛಂದೋರೂಪ: ಕಂದಪದ್ಯಗಳು, ವೃತ್ತಗಳು ಮತ್ತು ಗದ್ಯ
  10. ಹಸ್ತಪ್ರತಿಗಳು: ಓಲೆ ಗರಿ ಮತ್ತು ಕಾಗದ
  11. ಪ್ರಕಟವಾದ ವರ್ಷ: 1893, 1896
  12. ಸಂಪಾದಕರು: ಎಂ.ಎ. ರಾಮಾನುಜ ಅಯ್ಯಂಗಾರ್ ಮತ್ತು ಎಸ್.ಜಿ. ನರಸಿಂಹಾಚಾರ್
  13. ಪ್ರಕಾಶಕರು: ಕರ್ನಾಟಕ ಕಾವ್ಯಮಂಜರಿ
  14. ನಂತರದ ಆವೃತ್ತಿಗಳು:

ಅ. 1930, ಎಂ.ಎ. ರಾಮಾನುಜ ಅಯ್ಯಂಗಾರ್

ಆ. 1964, ದೇ. ಜವರೇಗೌಡ, ಶಾರದಾಮಂದಿರ, ಮೈಸೂರು

ಇ. 1976, ಆರ್.ವಿ. ಕುಲಕರ್ಣಿ, (ಗದ್ಯಾನುವಾದದೊಂದಿಗೆ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಈ. 1978, ಎಸ್.ಎಸ್. ಕೋತಿನ, ಸಾಹಿತ್ಯಭಂಡಾರ, ಹುಬ್ಬಳ್ಳಿ.

 

  1. ಕಿರು ಪರಿಚಯ:

ಕೆಲವು ಅನನ್ಯವಾದ ಲಕ್ಷಣಗಳನ್ನು ಹೊಂದಿರುವುದರಿಂದ ಕಬ್ಬಿಗರ ಕಾವ ಕುತೂಹಲವನ್ನು ಕೆರಳಿಸುವ ಕೃತಿ, ಆಂಡಯ್ಯನು ತನಗೆ ಹಿರಿಯರಾದ ಪಂಪ, ರನ್ನರಂತೆ, ಜೈನ ಧಾರ್ಮಿಕ ಕಾವ್ಯವನ್ನೂ ಬರೆದಿಲ್ಲ ಅಥವಾ ರಾಮಾಯಣ ಮಹಾಭಾರತಗಳನ್ನು ಆಧರಿಸಿದ ಲೌಕಿಕ ಕಾವ್ಯಗಳನ್ನೂ ಬರೆದಿಲ್ಲ. ಕಬ್ಬಿಗರ ಕಾವ ಪೌರಾಣಿಕ ಪಾತ್ರಗಳಾದ ಶಿವ, ಮನ್ಮಥ ಮತ್ತು ಚಂದ್ರರನ್ನು ಹೊಂದಿರುವ ಕಾಲ್ಪನಿಕ ಕೃತಿ. ಕಥೆಯ ಸ್ಥೂಲ ಹಂದರ ಈ ರೀತಿ ಇದೆ: ಶಿವನನ್ನು ಚಂದ್ರನನ್ನು ತನ್ನ ಜಟೆಯಲ್ಲಿ ಸೆರೆಯಿಟ್ಟನೆಂಬ ಲೋಕಪ್ರಸಿದ್ಧವಾದ ಸಂಗತಿಯು ಚಂದ್ರನ ಗೆಳೆಯನಾದ ಮನ್ಮಥನಿಗೆ ಕೋಪ ತರಿಸಿ ಅವನು ತನ್ನ ಸೈನ್ಯದೊಂದಿಗೆ ಶಿವನ ಮೇಲೆ ದಾಳಿ ಮಾಡುತ್ತಾನೆ. ಅವನು ಶಿವನ ಮೇಲೆ ಬಾಣಪ್ರಯೋಗ ಮಾಡಿ ಇನ್ನೇನು ಗೆಲ್ಲುವುದರಲ್ಲಿರುತ್ತಾನೆ. ಅಂತಿಮವಾಗಿ ಶಿವನು ಮನ್ಮಥನಿಗೆ ಶಾಪ ಕೊಡುತ್ತಾನೆ. ಶಿವನೊಂದಿಗಿನ ಈ ಮುಖಾಮುಖಿಯಲ್ಲದೆ, ಮನ್ಮಥನು ಒಬ್ಬ ಜೈನ ಸನ್ಯಾಸಿಯನ್ನು ಭೇಟಿಯಾಗಿ ಅವನಿದೆ ಅವಮಾನ ಮಾಡುತ್ತಾನೆ. ಆದರೆ, ಕೊನೆಗೆ ಅವನು ತನ್ನ ಸೋಲನ್ನು ಒಪ್ಪಿಕೊಂಡು ಆ ಶ್ರವಣನ ಕಾಲಿಗೆ ಬೀಳುತ್ತಾನೆ. ಆವನು ಒಂದು ಪುಷ್ಪಬಾಣವಾಗಿ ಬದಲಾಗುತ್ತಾನೆ. ಅಂತ್ಯದಲ್ಲಿ ಮನ್ಮಥನು ಈ ಕಥೆಯನ್ನು ವಿವರವಾಗಿ ಕೇಳುವುದರಿಂದಲೇ ಅವನಿಗೆ ಶಾಪಪರಿಹಾರವಾಗಿ ಅವನು ಮೊದಲಿನ ರೂಪವನ್ನು ಪಡೆದು ಸುಖವಾಗಿ ಬಾಳುತ್ತಾನೆ. ಈ ಕಥೆಯು ಸಾಕಷ್ಟು ಸಂಕೀರ್ಣವೂ ಪರಸ್ಪರ ವಿರೋಧಗಳಿಂದ ಕೂಡಿರುವುದೂ ಆಗಿದೆ. ಈ ಕಾವ್ಯವು ವರಿತ್ರೆ, ಬದಲಾವಣೆ ಮಾಡಿಕೊಂಡ ಮತ್ತು ಜಾನಪದದಿಂದ ಎರವಲು ತೆಗೆದುಕೊಂಡ ಆಶಯಗಳ ವಿಚಿತ್ರ ಸಂಯೋಜನೆಯಾಗಿದೆ.

ಅನೇಕ ವಿದ್ವಾಂಸರ ಪ್ರಕಾರ ಈ ಕಾವ್ಯದಲ್ಲಿ ಚಾರಿತ್ರಿಕ ಘಟನೆಗಳನ್ನು ಪರೋಕ್ಷವಾಗಿ ಸೂಚಿಸಲಾಗಿದೆ. ಆಂಡಯ್ಯನ ಆಶ್ರಯದಾತನಾಗಿದ್ದ ಕಾಮದೇವನು ಜೈನನಾಗಿದ್ದು ಅವನು ಹಿಂದೂ ದೊರೆಯಾದ ಬಲ್ಲಾಳನನ್ನು ಸೋಲಿಸಿದನು. ರಾಜಕೀಯ ಅಧಿಕಾರಕ್ಕಾಗಿ ಜೈನ ಮತ್ತು ವೀರಶೈವರ ನಡುವೆ ತೀವ್ರವಾದ ಸ್ಪರ್ಧೆಯಿದ್ದ ಮಧ್ಯಕಾಲೀನ ಕರ್ನಾಟಕದಲ್ಲಿ ಇದು ಮಹತ್ವದ ಸಂಗತಿಯಾಗಿತ್ತು. ಆದರೆ, ಚರಿತ್ರೆಮತ್ತು ಪುರಾಣಗಳ ಈ ಸಂಯೋಜನೆಯನ್ನು ಪರಿಣಾಮಕಾರಿಯಾಗಿ ಸಾಧಿಸಲು ಕವಿಗೆ ಸಾಧ್ಯವಾಗಿಲ್ಲ. ಕಥೆಯ ಚೌಕಟ್ಟಿನಲ್ಲಿ ಅನೇಕ ಪರಸ್ಪರ ವಿರೋಧಗಳಿವೆ.

ಈ ಕಾವ್ಯದಲ್ಲಿ ನಿಸರ್ಗ ವರ್ಣನೆ ಹಾಗೂ ಶೃಂಗಾರವರ್ಣನೆಗಳಿಗೆ ಹೇರಳವಾದ ಅವಕಾಶವಿದೆ. ಈ ಕಾವ್ಯದ ಅನೇಕ ವರ್ಣನೆಗಳು ಸುಂದರವಾಗಿದ್ದು ಸನ್ನಿವೇಶಗಳನ್ನು ಮನಸ್ಸಿಗೆ ಮುಟ್ಟಿಸುತ್ತವೆ. ಇದರಲ್ಲಿ 275 ಪದ್ಯಗಳೂ ಕೆಲವು ಗದ್ಯ ಭಾಗಗಳೂ ಇವೆ.

ಕಬ್ಬಿಗರ ಕಾವ ಭಾಷೆಗೆ ಸಂಬಂಧಿಸಿದ ಇನ್ನೊಂದು ಕಾರಣಕ್ಕಾಗಿಯೂ ಪ್ರಸಿದ್ಧವಾಗಿದೆ. ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಕನ್ನಡ ಪದಗಳನ್ನು ಬಳಸುವೆನೆಂಬ ತೀರ್ಮಾನವನ್ನು ಪ್ರಜ್ಞಾಪೂರ್ವಕವಾಗಿಯೇ ತೆಗೆದುಕೊಳ್ಳುತ್ತಾನೆ. ಪ್ರಾಯಶಃ ಸಂಸ್ಕೃತದ ವ್ಯಾಪಕವಾದ ಬಳಕೆಯು ಅನಿವಾರ್ಯವೆಂದು ಹೇಳುತ್ತಿದ್ದ ಇತರ ಕವಿಗಳನ್ನು ಗೇಲಿ ಮಾಡಲು ಬಯಸಿರಬಹುದು. ಆದರೆ, ಆಂಡಯ್ಯನು ಸಂಸ್ಕೃತವನ್ನು ಉಪಯೋಗಿಸುವ ಬಳಸುದಾರಿಯೊಂದನ್ನು ಕಂಡುಕೊಳ್ಳುತ್ತಾನೆ. ಅವನು ಕೇವಲ ತತ್ಸಮ ಪದಗಳನ್ನು ಮಾತ್ರ ಉಪಯೋಗಿಸುವುದಿಲ್ಲ. (ತತ್ಸಮ ಎಂದರೆ, ಧ್ವನಿಯ ನೆಲೆಯಲ್ಲಿ ಹಾಗೂ ಅರ್ಥದ ನೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಪಡೆಯದೆ, ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳು. ಆದರೆ, ತದ್ಭವ ಪದಗಳನ್ನು ಬಳಸಲು ಅವನಿಗೆ ಯಾವ ಅಭ್ಯಂತರವೂ ಇಲ್ಲ. ಇಂತಹ ತದ್ಭವಗಳಲ್ಲಿ ಧ್ವನಿಬದಲಾವಣೆಯು ಸಾಮಾನ್ಯವಾಗಿಯೂ ಅರ್ಥ ಬದಲಾವಣೆಯು ಅಪರೂಪವಾಗಿಯೂ ಅಗುತ್ತದೆ. ಹೀಗೆ ಕಬ್ಬಿಗರ ಕಾವ ಹಿಂಬಾಗಿಲ ಪ್ರವೇಶ ದೊರಕುತ್ತದೆ. ಆದ್ದರಿಂದಲೇ ಈ ವಿಷಯದಲ್ಲಿ ಆಂಡಯ್ಯನನ್ನು ಅನುಕರಿಸಿದವರು ಬಹಳ ಕಡಿಮೆ.

ಏನೇ ಇರಲಿ, ಈ ಪುಟ್ಟ ಕಾವ್ಯವು ಅನೇಕ ಅಭಿಮಾನಿಗಳನ್ನು ಪಡೆದಿದೆ. ಮತ್ತು ಇದರಿಂದ ಆಯ್ದ ಭಾಗಗಳು ಮತ್ತೆ ಮತ್ತೆ ಪಠ್ಯಪುಸ್ತಕಗಳಲ್ಲಿ ಕಾಣಿಸಿಕೊಳ್ಳುತ್ತವೆ.

 

  1. ಮುಂದಿನ ಓದು:

ಅ. ಆಂಡಯ್ಯ, ಸಂ. ರಂ. ಶ್ರೀ. ಮುಗಳಿ, 1949.

ಆ. ಆಂಡಯ್ಯ, ಆರ್.ಬಿ. ಪಾಟೀಲ್, 1937

ಇ.ಆಂಡಯ್ಯ, ಬಿ.ಎಸ್. ಕುಲಕರ್ಣಿ, 1965

 

  1. ವಿದ್ಯುನ್ಮಾನ ಲಿಂಕುಗಳು:
  2. ಅನುವಾದಗಳು:

ಮುಖಪುಟ / ಸಾಹಿತ್ಯ